ಭಾರತದಲ್ಲಿ ವಿದ್ಯುತ್ಸಾಮರ್ಥ್ಯ ಯೋಜನೆಗಳು

ವಿದ್ಯುದುತ್ಪಾದನೆಗೆ ಅವಶ್ಯವಾಗಿರುವ ಸಂಪನ್ಮೂಲಗಳನ್ನು ವ್ಯವಸ್ಥಿತವಾಗಿ ಬಳಸಿಕೊಂಡಿರುವ ಯೋಜನೆಗಳನ್ನು ಕುರಿತ ವಿವರಣೆ ಪ್ರಸಕ್ತ ಲೇಖನದಲ್ಲಿದೆ. ಭಾರತದ ವಿಸ್ತೀರ್ಣ 32,87,267ಚ.ಕಿ.ಮೀ. ಜನಸಂಖ್ಯೆ ಸುಮಾರು ನೂರಾ ಎರಡು ಕೋಟಿ. ಹಳ್ಳಿಗಳ ಸಂಖ್ಯೆ ಹೆಚ್ಚು, ಸುಮಾರು ಆರುಲಕ್ಷ. ಇಂಥ ದೊಡ್ಡ ದೇಶದಲ್ಲಿ ವಿದ್ಯುದುತ್ಪಾದನೆ ಹಾಗೂ ಅದಕ್ಕಿರುವ ಬೇಡಿಕೆಯ ಪೂರೈಕೆ ಒಂದು ಕಠಿಣ ಸಮಸ್ಯೆ. ವಾಸ್ತವವಾಗಿ ಭಾರತದಲ್ಲಿ ವಿದ್ಯುದ್ಯೋಜನೆಗಳು ಅಧಿಕ ಸಂಖ್ಯೆಯಲ್ಲಿ ನಿರ್ಮಾಣವಾದದ್ದು ಸ್ವಾತಂತ್ರ್ಯಾನಂತರವೇ. ಇವುಗಳಲ್ಲಿ ಮೂರು ಬಗೆ: ಜಲವಿದ್ಯುದ್ಯೋಜನೆಗಳು, ಶಾಖಶಕ್ತಿ ಬಳಕೆ ಯೋಜನೆಗಳು, ಪರಮಾಣು ಶಕ್ತಿ ಬಳಕೆಯೋಜನೆಗಳು ಹಾಲಿ ಇರುವ ವಿದ್ಯುತ್‍ಸ್ಥಾವರಗಳಲ್ಲಿ ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಿಗೆ ಪ್ರಥಮಸ್ಥಾನ, ಜಲವಿದ್ಯುದ್ಯೋಜನೆಗಳಿಗೆ ಎರಡನೆಯ ಸ್ಥಾನ, ಪರಮಾಣು ವಿದ್ಯುತ್ ಸ್ಥಾವರಗಳಿಗೆ ಮೂರನೆಯ ಸ್ಥಾನ.
ಜಲವಿದ್ಯುದ್ಯೋಜನೆ ಸುಲಭ ಹಾಗೂ ಅಗ್ಗದ ವಿಧಾನ. ಇಲ್ಲಿ ವಿದ್ಯುದುತ್ಪಾದನೆಗೆ ಬಳಸಿದ ನೀರು ವ್ಯಯವಾಗುವುದಿಲ್ಲ. ನೀರಾವರಿಗಾಗಲಿ ಕೆಳಗೆ ಇನ್ನೊಂದು ವಿದ್ಯುದುತ್ಪಾದನ ಕೇಂದ್ರ ಸ್ಥಾಪಿಸಿ ವಿದ್ಯುತ್ತು ಪಡೆಯುವುದಕ್ಕಾಗಲಿ ಉಪಯೋಗಿಸಬಹುದು. ಇವುಗಳ ನಿರ್ಮಾಣ ವೆಚ್ಚ ಹೆಚ್ಚಾದರೂ ನಿರ್ವಹಣ ವೆಚ್ಚ ಕಡಿಮೆ. ಮಲಿನತೆಯ ಸಮಸ್ಯೆ ಇರುವುದಿಲ್ಲ. ಆಣೆಕಟ್ಟು ನಿರ್ಮಾಣ, ಇದರ ಫಲವಾಗಿ ಅರಣ್ಯನಾಶ, ಪರಿಸರದ ಮೇಲೆ ಹತೋಟಿ ತಪ್ಪುವಿಕೆ, ಜನ ವಸತಿ ಹಾಗೂ ವ್ಯವಸಾಯದ ಪ್ರದೇಶಗಳ ಮುಳುಗಡೆ, ಪ್ನನರ್ವಸತಿ ನಿರ್ಮಾಣ ಇತ್ಯಾದಿ ಸಮಸ್ಯೆಗಳು ಜಲವಿದ್ಯುದ್ಯೋಜನೆಗಳ ಪರಿಣಾಮ. ಅದೂ ಅಲ್ಲದೆ ಪ್ರತಿವರ್ಷ ಚೆನ್ನಾಗಿ ಮುಂಗಾರು ಮಳೆ ಬಂದು ಜಲಾಶಯಗಳು ನಿರೀಕ್ಷಿತ ಮಟ್ಟಕ್ಕೆ ತುಂಬಿಕೊಳ್ಳಬೇಕು. ಸ್ವಲ್ಪ ಏರುಪೇರಾದರೂ ವಿದ್ಯುದಾಗಾರಗಳಿಂದ ನಿರೀಕ್ಷಿಸಿದಷ್ಟು ವಿದ್ಯುತ್ತು ಪಡೆಯಲಾಗದು. ಶಾಖೋತ್ಪನ್ನ ವಿದ್ಯುತ್ ಸ್ಥಾವರದಲ್ಲಿ ಗರಿಷ್ಠ ಪ್ರಮಾಣದಲ್ಲಿ ನಿರಂತರ ವಿದ್ಯುದುತ್ಪಾದನೆ ಸಾಧ್ಯವಿಲ್ಲ. ನೀರು ಕಾಸಲು ಬೇಕಾಗುವ ಶಾಖಶಕ್ತಿಗೆ ಕಲ್ಲಿದ್ದಲು ಬಳಸಬೇಕಾಗುತ್ತದೆ. ಇದನ್ನು ದೊರಕಿಸಿಕೊಳ್ಳವುದು ಕಷ್ಟದ ಕೆಲಸ. ಕಲ್ಲಿದ್ದಲು ಗಣಿಗಳ ಸಮೀಪದಲ್ಲಿಯೇ ವಿದ್ಯುದಾಗಾರಗಳ ನಿರ್ಮಾಣವಾದರೆ ಈ ಸಮಸ್ಯೆ ಇರುವುದಿಲ್ಲವಾದರೂ ಬೇರೆ ಪ್ರದೇಶದಲ್ಲಿ ಅಂದರೆ ನೀರಿನ ಸೌಕರ್ಯವಿರುವಕಡೆ ಸಮತಟ್ಟಾದ ಪ್ರದೇಶದಲ್ಲಿ ಸ್ಥಾವರ ನಿರ್ಮಿಸಬೇಕಾಗಿಬಂದಾಗ ಕಲ್ಲಿದ್ದಲಿನ ಸಾಗಾಣಿಕೆಗೆ ಪ್ರಯತ್ನಿಸಬೇಕಾಗುತ್ತದೆ. ಕಾಲ ಕ್ರಮದಲ್ಲಿ ಕಲ್ಲಿದ್ದಲು ಇಂಧನ ದೊರಕದ ಪರಿಸ್ಥಿತಿಯೂ ತಲೆದೋರಬಹುದು. ಶಾಖೋತ್ಪನ್ನ ವಿದ್ಯುತ್‍ಸ್ಥಾವರಗಳ ನಿರ್ವಹಣ ವೆಚ್ಚ ಹೆಚ್ಚು. ಜಲವಿದ್ಯುದಾಗಾರಗಳ ನಿರ್ಮಾಣಕ್ಕೆ ತಗಲುವಷ್ಟು ಅವಧಿ ಇಲ್ಲಿ ಬೇಕಾಗುವುದಿಲ್ಲ. ವಾಯುಮಲಿನತೆಯೂ ಒಂದು ಸಮಸ್ಯೆಯಾಗಿ ಉಳಿಯಬಹುದು. ಇದೇ ರೀತಿ ಪರಮಾಣು ವಿದ್ಯುತ್ ಸ್ಥಾವರಗಳ ನಿರ್ಮಾಣವೂ ಒಂದು ಬಗೆಯ ಸಮಸ್ಯೆಯನ್ನು ತಂದೊಡ್ಡುತ್ತದೆ. ಇವುಗಳ ನಿರ್ಮಾಣ ವೆಚ್ಚವೂ ಹೆಚ್ಚು. ಇಂಧನ ಮತ್ತು ಭಾರಜಲ ಪೂರೈಕೆಯಲ್ಲಿ ಭಾರತ ಇನ್ನೂ ಹಿಂದೆಯೇ ಇದೆ. ಒಟ್ಟಾರೆ ಹೇಳುವುದಾದರೆ ಭಾರತದಲ್ಲಿ ಜಲವಿದ್ಯುನ್ಮೂಲಗಳನ್ನು ಬಳಸಿಕೊಳ್ಳೂವುದು ಹೆಚ್ಚು ಯುಕ್ತ ಎಂದು ಹೇಳಬಹುದು.
ಭಾರತ ಮೊತ್ತಮೊದಲಿಗೆ ಜಲವಿದ್ಯುದ್ಯೋಜನೆಗೆ ತೊಡಗಿದ್ದು 1897ರಲ್ಲಿ. ಪಶ್ಚಿಮ ಬಂಗಾಲದ ಡಾರ್ಜಿಲಿಂಗಿನ ಬಳಿ 200 ಕಿಲೊವಾಟ್ ಸಾಮಥ್ರ್ಯದ ಘಟಕವನ್ನು ಸ್ಥಾಪಿಸುವುದರ ಮೂಲಕ. ಇದೊಂದು ತೀರ ಅಲ್ಪ ಪ್ರಮಾಣದ ಘಟಕವಾಗಿತ್ತು. ಅಧಿಕ ಪ್ರಮಾಣದ ವಿದ್ಯುತ್ತನ್ನು ಕೊಡುವ ಜಲವಿದ್ಯುದ್ಯೋಜನೆಯನ್ನು ಕಾರ್ಯಗತಗೊಳಿಸಿದ ಕೀರ್ತಿ ಕರ್ನಾಟಕಕ್ಕೆ ಸಲ್ಲುತ್ತದೆ. ಕೋಲಾರದ ಚಿನ್ನದ ಗಣಿಪ್ರದೇಶಕ್ಕೆ ವಿದ್ಯುತ್ತನ್ನು ಪೂರೈಸುವ ಉದ್ದೇಶದಿಂದ ಮಂಡ್ಯಜಿಲ್ಲೆಯ ಶಿವನಸಮುದ್ರ ಎಂಬಲ್ಲಿ ವಿದ್ಯುದುತ್ಪಾದನೆಗೆ ಯತ್ನಿಸಲಾಯಿತು. 1902ರಲ್ಲಿ ಶಿವನಸಮುದ್ರ ವಿದ್ಯುದಾಗಾರದಲ್ಲಿ ಮೂರು ಮೆಗಾವಾಟ್ ಸಾಮಥ್ರ್ಯದ ಘಟಕವನ್ನು ಸ್ಥಾಪಿಸಲಾಯಿತು. ಇದಕ್ಕೆ ಆಧಾರ ಕಾವೇರಿ ನದಿ ನೀರು. ಇಲ್ಲಿಂದ ಉತ್ಪಾದನೆಯಾದ ವಿದ್ಯುತ್ತನ್ನು ಕೋಲಾರದ ಚಿನ್ನದಗಣಿ ಪ್ರದೇಶಕ್ಕೆ ಸಾಗಿಸಲು 33 ಕಿಲೊವಾಟ್ ಸಾಮಥ್ರ್ಯದ ಸುಮಾರು 147 ಕಿಮೀ ಉದ್ದದ ಹೈವೋಲ್ಟೇಜ್ ಪ್ರಸರಣ ತಂತಿಗಳನ್ನು ಹಾಕಲಾಯಿತು. ಆ ಕಾಲಕ್ಕೆ ಇದು ಪ್ರಪಂಚದಲ್ಲೇ ಉದ್ದವಾದ ವಿದ್ಯುತ್ ಪ್ರಸರಣ ತಂತಿಯೆಂದು ದಾಖಲಾಯಿತು. ಶಿವನಸಮುದ್ರ ವಿದ್ಯುದಾಗಾರದ ಇಂದಿನ ವಿದ್ಯುತ್ ಸಾಮಥ್ರ್ಯ 42 ಮೆಗಾವಾಟುಗಳು.
ಒಂದನೆಯ ಮಹಾಯುದ್ಧಕ್ಕೆ (1914) ಮೊದಲು 50 ಮೆಗಾವಾಟ್ ಸಾಮಥ್ರ್ಯದ ಕೊಪೋಲಿ ಜಲವಿದ್ಯುದಾಗಾರ ಮಹತ್ತ್ವದ್ದಾಗಿತ್ತು. ಮುಂಬಯಿ ಪ್ರದೇಶಕ್ಕೆ ವಿದ್ಯುತ್ತು ಸರಬರಾಜು ಮಾಡಲು ತಾತಾ ಸಂಸ್ಥೆ ಈ ಯೋಜನೆಯನ್ನು ರೂಪಿಸಿತ್ತು.
ಭಾರತದಲ್ಲಿ ಕೈಗಾರಿಕೆಗಳ ಸ್ಥಾಪನೆ ಹಾಗೂ ಅಭಿವೃದ್ಧಿಯ ಬಗ್ಗೆ 1916-18 ಅವಧಿಯಲ್ಲಿ ಸಮೀಕ್ಷೆ ನಡೆಸಿದ ಭಾರತೀಯ ಕೈಗಾರಿಕಾ ಆಯೋಗ ದೇಶದಲ್ಲಿ ವಿದ್ಯುದುತ್ಪಾದನೆಯ ಮಹತ್ತ್ವವನ್ನು ಒತ್ತಿ ಹೇಳಿದುದಲ್ಲದೆ ಅದು ಜಲ ವಿದ್ಯುದಾಗಾರಗಳ ಸ್ಥಾಪನೆಗೆ ಜಲಸಂಪನ್ಮೂಲಗಳನ್ನು ಸಮರ್ಥ ರೀತಿಯಲ್ಲಿ ಬಳಸಿಕೊಳ್ಳಲು ಸಲಹೆ ನೀಡಿತು ಕೂಡ. 1919-21 ಅವಧಿಯಲ್ಲಿ ಈ ವರದಿಗಳು ತಯಾರಾದುವು. ಆದರೆ ಸಂವಿಧಾನದಲ್ಲಿ ಉಂಟಾದ ಬದಲಾವಣೆಗಳಿಂದಾಗಿ ಈ ಕಾರ್ಯಗಳನ್ನು ಪ್ರಾಂತೀಯ ಸರ್ಕಾರಗಳಿಗೆ ಬಿಟ್ಟುಕೊಡಲಾಯಿತು. ಎರಡು ಮಹಾಯುದ್ಧಗಳ ನಡುವಿನ ಅವಧಿಯಲ್ಲಿ ಹಲವಾರು ಜಲವಿದ್ಯುದ್ಯೋಜನೆಗಳ ಕಾರ್ಯ ತ್ವರಿತ ಗತಿಯಲ್ಲಿ ಮುನ್ನಡೆಯತೊಡಗಿತು. ತಾತಾ ಹೈಡ್ರೊಎಲೆಕ್ಟ್ರಿಕ್ ವಕ್ರ್ಸ್ ಸಂಸ್ಥೆ ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳ ಬಳಿ ಜಲವಿದ್ಯುದಾಗಾರಗಳನ್ನು ವಿಸ್ತರಿಸಿತು. ಕರ್ನಾಟಕದಲ್ಲಿ (ಆಗಿನ ಮೈಸೂರು) ಶಿವಸಮುದ್ರ ಯೋಜನೆಯನ್ನು ವಿಸ್ತರಿಸಲಾಯಿತು. ಪಂಜಾಬಿನ ಉಹಲ್ ನದಿ ಯೋಜನೆ, ತಮಿಳುನಾಡಿನ ಪೈಕಾರ ಹಾಗೂ ಪಾಪನಾಶಮ್ ಜಲವಿದ್ಯುದ್ಯೋಜನೆಗಳೂ, ಉತ್ತರ ಪ್ರದೇಶದಲ್ಲಿ ಗಂಗಾನದಿ ನಾಲಾ ವಿದ್ಯುದಾಗಾರಗಳು ಹೆಸರಿಸಬೇಕಾದವು. ಈ ರಾಜ್ಯಗಳಲ್ಲಿ ವಿದ್ಯುಜ್ಜಾಲಗಳನ್ನು ಹೆಣೆಯಲಾಯಿತು. 1900-47 ಅವಧಿಯಲ್ಲಿ ವಿದ್ಯುದುತ್ಪಾದನೆ ಕುರಿನಂತೆ ನಡೆದ ಕೆಲಸ ತೀರ ಕಡಿಮೆ. ಸ್ವಾತಂತ್ರ್ಯ ಬಂದ ವರ್ಷದ ಅಂತ್ಯದ ವೇಳೆಗೆ ಭಾರತದ ಒಟ್ಟು ವಿದ್ಯುತ್‍ಸಾಮಥ್ರ್ಯ 1362 ಮೆಗಾವಾಟುಗಳು. ಇದರಲ್ಲಿ ಜಲವಿದ್ಯುತ್ ಸಾಮಥ್ರ್ಯ 508 ಮೆಗಾವಾಟುಗಳಷ್ಟಾದರೆ ಶಾಖ ವಿದ್ಯುತ್ ಘಟಕಗಳ ಒಟ್ಟು ಸಾಮಥ್ರ್ಯ 854 ಮೆಗಾವಾಟುಗಳು.
ತಮಿಳುನಾಡಿನಲ್ಲಿ 1908ರ ವೇಳೆಗೆ ಅತಿ ಸಣ್ಣ ಪ್ರಮಾಣದ ಜಲವಿದ್ಯುತ್ ಘಟಕಗನ್ನು ಚಾ ತೋಟಗಳಲ್ಲಿ ಹಾಗೂ ನೀಲಗಿರಿಯ ಕಾಟೇರಿ ಎಂಬಲ್ಲಿ ಸ್ಥಾಪಿಸಲಾಗಿತ್ತು. ಸಮರ್ಥ ರೀತಿಯಲ್ಲಿ ವಿದ್ಯುದುತ್ಪಾದನೆಗೆ ತೊಡಗಿದ್ದು 1925ರಿಂದೀಚೆಗೆ. ಆಗಿನ ಮದ್ರಾಸ್ ಸರ್ಕಾರ ಪೈಕಾರ ನದಿಯ ನೀರನ್ನು ಉದಕಮಂಡಲಕ್ಕೆ 32 ಕಿಮೀ ದೂರದ ಸಿಂಗಾರ ಎಂಬಲ್ಲಿ ಸ್ಥಾಪಿಸಲಾದ ವಿದ್ಯುದಾಗಾರಕ್ಕೆ ಒದಗಿಸುವುದರ ಮೂಲಕ 70.2 ಮೆಗಾವಾಟ್ ವಿದ್ಯುದುತ್ಪಾದನೆಗೆ ಅವಕಾಶ ಮಾಡಿಕೊಟ್ಟಿತು. ಕಾವೇರಿ ನದಿಗೆ ಕಟ್ಟಲಾದ ಮೆಟ್ಟೂರು ಅಣೆಕಟ್ಟು ಜಲಾಶಯದ ನೀರನ್ನು ಅದರ ಬುಡದಲ್ಲಿ ಸ್ಥಾಪಿಸಲಾದ ವಿದ್ಯುತ್‍ಸ್ಥಾವರದ ಕೆಲಸಕ್ಕೆ ಬಳಸಲಾಯಿತು. ಇದರ ಸಾಮಥ್ರ್ಯ 40 ಮೆಗಾವಾಟುಗಳು ಇದೇ ರೀತಿ ಪಾಪನಾಶಮ್ ಜಲ ವಿದ್ಯುದ್ಯೋಜನೆಯ ಮೊದಲ ಹಂತದ ಕಾರ್ಯ ಈ ಅವಧಿಯಲ್ಲಿ ಕಾರ್ಯಗತವಾಯಿತು. ಇದರ ಸಾಮಥ್ರ್ಯ 40 ಮೆಗಾವಾಟುಗಳು ಇದೇ ರೀತಿ ಪಾಪನಾಶಮ್ ಜಲ ವಿದ್ಯುದ್ಯೋಜನೆಯ ಮೊದಲ ಹಂತದ ಕಾರ್ಯ ಈ ಅವಧಿಯಲ್ಲಿ ಕಾರ್ಯಗತವಾಯಿತು. ಇದರ ಸಾಮಥ್ರ್ಯ 28 ಮೆಗಾವಾಟುಗಳು. ತಾಮ್ರಪರ್ಣಿ ನದಿ ನೀರು ಇಲ್ಲಿ ಬಳಕೆಯಾಗುತ್ತದೆ. ಎರಡನೆಯ ಮಹಾಯುದ್ಧದ ಆರಂಭದಲ್ಲಿ (1939) ಇದ್ದ 1140 ಮೆಗಾವಾಟ್ ಸಾಮಥ್ರ್ಯ ಸ್ವಾತಂತ್ರ್ಯ ಬರುವ ವೇಳೆಗೆ (1947) 1362 ಮೆಗಾವಾಟುಗಳಿಗೆ ಏರಿತ್ತು. ಇದು ಗಮನಾರ್ಹವಾದ ಬದಲಾವಣೆ ಏನೂ ಅಲ್ಲ ಎಂಬುದು ಸ್ಪಷ್ಟ.
1947ರ ತರುವಾಯದಲ್ಲಿ ವಿದ್ಯುದುತ್ಪಾದನೆಗೆ ಹೆಚ್ಚು ಆದ್ಯತೆ ನೀಡುವ ಸಲುವಾಗಿ ಕೇಂದ್ರವಿದ್ಯುತ್ ಪ್ರಾಧಿಕಾರ ಸೆಂಟ್ರಲ್ ಎಲೆಕ್ಟ್ರಿಸಿಟಿ ಅಥಾರಿಟಿ ಮತ್ತು ವಿವಿಧ ರಾಜ್ಯವಿದ್ಯುಚ್ಛಕ್ತಿ ಮಂಡಳಿಗಳನ್ನು ರಚಿಸಲಾಯಿತು. ರಾಜ್ಯದ ಪರಿಮಿತಿಯಲ್ಲಿ ಬರುವ ಪ್ರದೇಶಗಳಲ್ಲಿ ವಿದ್ಯುತ್ಸರಬರಾಜಿನ ಮೇಲೆ ಹತೋಟಿಯನ್ನೂ ಹೊಸದಾಗಿ ವಿದ್ಯುದ್ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಜವಾಬ್ದಾರಿಯನ್ನೂ ಮಂಡಳಿಗಳಿಗೆ ವಹಿಸಲಾಯಿತು. ಪ್ರಾಧಿಕಾರ ರಾಷ್ಟ್ರೀಯ ಸಂಪನ್ಮೂಲಗಳನ್ನು ವಿದ್ಯುದುತ್ಪಾದನೆಗೆ ಬಳಸಿಕೊಳ್ಳುವುದರ ಬಗ್ಗೆ ಅಧ್ಯಯನ ನಡೆಸುವ ಜವಾಬ್ದಾರಿ ಹೊತ್ತಿತು. ಕ್ರಮೇಣ ವಿದ್ಯುದುತ್ಪಾದನೆ ಹೆಚ್ಚಿಸಲು ಈ ವಿಧಾನ ನೆರವಾಯಿತು.
ವಿದ್ಯುತ್ ಸಾಮಥ್ರ್ಯ ಯೋಜನೆಗಳಿಗೆ ಒಂದು ಹೊಸ ರೂಪ ಕೊಡುವಂತಾದದ್ದು ಭಾರತ ಪಂಚವಾರ್ಷಿಕ ಯೋಜನೆಗಳನ್ನು ಜಾರಿಗೆ ತಂದಾಗಲೆ. 1951ರಲ್ಲಿ ಮೊದಲನೆಯ ಪಂಚವಾರ್ಷಿಕ ಯೋಜನೆ ಕಾರ್ಯಕ್ರಮ ಆರಂಭವಾಯಿತು. ಆಗ ದೇಶದಲ್ಲಿ ಉಂಟಾದ ಆಹಾರ ಸಮಸ್ಯೆಯನ್ನು ಎದುರಿಸಬೇಕಾಗಿ ಬಂದುದರಿಂದ ನೀರಾವರಿ ಮತ್ತು ವ್ಯವಸಾಯದ ಕಾರ್ಯಗಳಿಗೆ ಆದ್ಯತೆ ನೀಡಬೇಕಾಯಿತು. ಆದರೆ ನೀರಾವರಿ ಯೋಜನೆಗಳನ್ನು ವಿವಿಧೋದ್ದೇಶಗಳಿಗಾಗಿ ರೂಪಿಸಿ ವಿದ್ಯುದುತ್ಪಾದನೆಯನ್ನು ಇದರಲ್ಲಿ ಒಂದು ಅಂಗವಾಗಿ ಇಟ್ಟುಕೊಳ್ಳಲಾಯಿತು. 30 ಮೆಗಾವಾಟ್ ಸಾಮಥ್ರ್ಯದಿಂದ ಹಿಡಿದು 500 ಮೆಗಾವಾಟ್ ಸಾಮಥ್ರ್ಯದ ಘಟಕಗಳ ಅತಿಶಾಖ ವಿದ್ಯುತ್ ಸ್ಥಾವರಗಳ ನಿರ್ಮಾಣದವರೆಗೂ ಈ ಯೋಜನೆಗಳಲ್ಲಿ ಅವಕಾಶ ಮಾಡಿಕೊಡಲಾಗಿದೆ. ಪುಡಿ ಮಾಡಿದ ಕಲ್ಲಿದ್ದಲನ್ನು ಶಾಖ ವಿದ್ಯುತ್ ಸ್ಥಾವರಗಳಲ್ಲಿ ಬಳಸಲು ತೊಡಗಿದ್ದು ಮೂರನೆಯ ಪಂಚವಾರ್ಷಿಕ ಯೋಜನೆಯ ಕಾಲದಲ್ಲಿ (1961-66).
ವಿಶಿಷ್ಟವೆನಿಸಿದ ವಿವಿಧೋದ್ದೇಶ ಯೋಜನೆ ಭಾಕ್ರಾನಂಗಲ್ ಯೋಜನೆ. ಪಂಜಾಬ್, ಹರಿಯಾನ, ಹಿಮಾಚಲಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳಲ್ಲಿಯ ಭೂಮಿಗೆ ನೀರಾವರಿ ಹಾಗೂ ಒಟ್ಟು 1204 ಮೆಗಾವಾಟ್ ವಿದ್ಯುತ್ ಸಾಮಥ್ರ್ಯದ ಸ್ಥಾಪನೆ ಈ ಯೋಜನೆಯ ಉದ್ದೇಶವಾಗಿತ್ತು. ಇದೇ ರೀತಿ ಮೊದಲ ಪಂಚವಾರ್ಷಿಕ ಯೋಜನೆಯಲ್ಲಿ ದಾಮೋದರ ನದಿಕಣಿವೆ ಪ್ರದೇಶದಲ್ಲಿ ನೀರಾವರಿ, ಪ್ರವಾಹನಿಯಂತ್ರಣ ಹಾಗೂ ವಿದ್ಯುಚ್ಛಕ್ತಿ ಉತ್ಪಾದನೆ ಕಾರ್ಯವನ್ನು ಅಳವಡಿಸಲಾಯಿತು. ಇದು ಬಿಹಾರ ಹಾಗೂ ಪಶ್ಚಿಮಬಂಗಾಳ ರಾಜ್ಯಗಳ ಸಂಯುಕ್ತ ಯೋಜನೆ. ಇದರಲ್ಲಿ ದಾಮೋದರ್ ನದಿ ಹಾಗೂ ಅದರ ಉಪನದಿಗಳಿಗೆ ಹಲವಾರು ಅಣೆಕಟ್ಟುಗಳನ್ನು ಕಟ್ಟಲಾಗಿದೆ. ಇವು ಬಿಹಾರದ ಧನಬಾದ್ ಜಿಲ್ಲೆಯಲ್ಲಿ ಹಾಗೂ ಪಶ್ಚಿಮಬಂಗಾಳದ ಬರ್ಡವಾನ್ ಜಿಲ್ಲೆಯಲ್ಲಿವೆ. ಯೋಜನೆಯ ಒಟ್ಟು ವಿದ್ಯುತ್‍ಸಾಮಥ್ರ್ಯ 1039 ಮೆಗಾವಾಟುಗಳು. ಎರಡೂ ರಾಜ್ಯಗಳಿಗೆ ವಿದ್ಯಚ್ಛಕ್ತಿಯಲ್ಲಿ ಪಾಲು ದೊರೆಯುತ್ತಿದೆ.
ಭಾಕ್ರಾನಂಗಲ್ ಯೋಜನೆಯ, ಬಲು ಹಿಂದೆಯೇ ಪೂರೈಸಿತು. ಸಟ್ಲೆಜ್ ನದಿಗೆ ಅಡ್ಡವಾಗಿ ಭಾಕ್ರಾಕಂದರದಲ್ಲಿ 226 ಮೀಟರ್ ಎತ್ತರದ 518 ಮೀಟರ್ ಉದ್ದದ ಭಾಕ್ರಾ ಅಣೆಯೂ ಇದರ ತಳದಲ್ಲಿ ಎರಡೂ ದಂಡೆಗಳಲ್ಲಿ ಗಂಗೂವಾಲ್ ಹಾಗೂ ಕೊಟ್ಲಾ ಎಂಬಲ್ಲಿ ವಿದ್ಯುದಾಗಾರಗಳೂ ನಿರ್ಮಾಣವಾಗಿದೆ.
ಮೊದಲ ಪಂಚವಾರ್ಷಿಕ ಯೋಜನೆಕಾಲದಲ್ಲಿ ಕೈಗೆತ್ತಿಕೊಳ್ಳಲಾದ ಮತ್ತೊಂದು ವಿಶಿಷ್ಟ ವಿವಿಧೋದ್ದೇಶಯೋಜನೆ ಮಧ್ಯಪ್ರದೇಶ ಹಾಗೂ ರಾಜಸ್ಥಾನ ರಾಜ್ಯಗಳ ನಡುವಣ ಚಂಬಲ್ ನದಿ ಕಣಿವೆಯೋಜನೆ. ಮೊದಲ ಹಂತದಲ್ಲಿ ಗಾಂಧಿಸಾಗರ ಅಣೆ ಮತ್ತು ವಿದ್ಯುದುತ್ಪಾದನಾ ಕೇಂದ್ರ ಹಾಗೂ ಕೋಟಾ ಅಣೆಕಟ್ಟು, ಎರಡನೆಯ ಹಂತದಲ್ಲಿ ರಾಣಾಪ್ರತಾಪಸಾಗರ ಅಣೆ ವಿದ್ಯುದುತ್ಪಾದನಾಕೇಂದ್ರ ಹಾಗೂ ಜವಾಹರ್‍ಸಾಗರ ಅಣೆಕಟ್ಟು. ಮತ್ತು ವಿದ್ಯುದುತ್ಪಾದನಾಕೇಂದ್ರ ಹಾಗೂ ಜವಾಹರ್‍ಸಾಗರ ಅಣೆಕಟ್ಟು ಮತ್ತು ವಿದ್ಯುದುತ್ಪಾದನಾ ಕೇಂದ್ರ. ಈ ಮೂರು ವಿದ್ಯುದುತ್ಪಾದನಾ ಕೇಂದ್ರಗಳ ಒಟ್ಟು ಸಾಮಥ್ರ್ಯ 386 ಮೆಗಾವಾಟುಗಳು.
ವಿವಿಧೋದ್ದೇಶ ಯೋಜನೆಗಳೇ ಅಲ್ಲದೆ ಮೊದಲ ಹಾಗೂ ಎರಡನೆಯ ಪಂಚವಾರ್ಷಿಕ ಯೋಜನೆ ಕಾಲದಲ್ಲಿ ಬರಿಯ ವಿದ್ಯುದುತ್ಪಾದನೆಗಾಗಿಯೇ ರೂಪುಗೊಂಡ ಯೋಜನೆಗಳಲ್ಲಿ ಆಗ್ನೇಯ ಏಷ್ಯಾದಲ್ಲಿ ಪ್ರಥಮವೆನ್ನಲಾದ 891 ಮೆಗಾವಾಟ್ ಒಟ್ಟು ಸಾಮಥ್ರ್ಯದ ಶರಾವತಿ ವಿದ್ಯುದಾಗಾರ ನಿರ್ಮಾಣಕಾರ್ಯ, ಮಹಾರಾಷ್ಟ್ರದ ಕೊಯ್ನಾ ನದಿಯೋಜನೆ ಹಾಗೂ ತಮಿಳುನಾಡಿನ ಕುಂದಾ ಯೋಜನೆ ಮುಖ್ಯವಾದವು. ಇದೇ ಅವಧಿಯಲ್ಲಿ ಭಾರಿ ಪ್ರಮಾಣದ ಕೈಗಾರಿಕೆಗಳ ಅಭಿವೃದ್ಧಿಯ ಕಡೆಗೂ ಹೆಚ್ಚಿನ ಮಹತ್ತ್ವ ನೀಡಲಾಯಿತು. ವಿದ್ಯುದುತ್ಪಾದನೆ ಹೆಚ್ಚಿಸುವ ಸಲುವಾಗಿ ಶಾಖ ವಿದ್ಯುತ್ ಸ್ಥಾವರಗಳ ನಿರ್ಮಾಣಕ್ಕೆ ಗಮನ ಹರಿಸಲಾಯಿತು. ಗ್ರಾಮಾಂತರ ಪ್ರದೇಶಗಳಿಗೆ ವಿದ್ಯುಚ್ಛಕ್ತಿ ಸೌಲಭ್ಯ ದೊರಕಿಸಿ ಕೊಡುವುದು ಒಂದು ಉದ್ದೇಶವಾಗಿತ್ತು.
ವಲಯಗಳ ರಚನೆ: ಎರಡು ಪಂಚವಾರ್ಷಿಕ ಯೋಜನೆಗಳ ಬಳಿಕ ಕೈಗಾರಿಕೆಗಳ ಅಭಿವೃದ್ಧಿಗಾಗಿ ವಿದ್ಯುಚ್ಛಕ್ತಿಯ ಅಗತ್ಯ ಹೆಚ್ಚಾಯಿತು. ಮೂರನೆಯ ಪಂಚವಾರ್ಷಿಕ ಯೋಜನೆ (1961-66) ಹಾಗೂ ಅನಂತರದ ಮೂರು ವಾರ್ಷಿಕ ಯೋಜನೆಗಳು ವಿದ್ಯುದುತ್ಪಾದನೆಗೆ ಹೆಚ್ಚು ಒತ್ತುಕೊಟ್ಟವು, ಮೂರನೆಯ ಯೋಜನಾವಧಿಯಲ್ಲಿ ಅಧಿಕ ವಿದ್ಯುದುತ್ಪಾದನೆಯ ಹಾಗೂ ಪ್ರಾದೇಶಿಕವಾಗಿ ಹೆಚ್ಚು ಗಮನ ನೀಡುವ ಉದ್ದೇಶದಿಂದ ಭಾರತವನ್ನು ಐದು ವಲಯಗಳಾಗಿ ಮಾಡಿಕೊಂಡು ಪ್ರತಿ ವಲಯದಲ್ಲಿ ಒಂದೊಂದು ವಲಯ ವಿದ್ಯುಚ್ಛಕ್ತಿಮಂಡಳಿಯನ್ನು ರಚಿಸಲಾಯಿತು. ಇದು ವಿದ್ಯುದಭಿವರ್ಧನೆಗೆ ನೆರವಾಯಿತು. ವಿದ್ಯುತ್ ವ್ಯವಸ್ಥೆಗಳ ಸಮಗ್ರ ಕಾರ್ಯಚರಣೆಗೆ ಹಾಗೂ ಇಂಧನ ಮತ್ತು ಜಲಶಕ್ತಿ ಮೂಲಗಳನ್ನು ಗರಿಷ್ಠ ಪ್ರಮಾಣದಲ್ಲಿ ಬಳಸುವುದರ ಬಗ್ಗೆ ಗಮನ ಹರಿಸುವುದು ಈ ಮಂಡಳಿಗಳ ಉದ್ದೇಶ. ವಲಯ-ರಾಜ್ಯ ವಿತರಣೆ ಹೀಗಿದೆ:
ವಲಯಗಳು

ರಾಜ್ಯ ಹಾಗೂ ಒಕ್ಕೂಟ ಪ್ರದೇಶಗಳು

ಉತ್ತರವಲಯ
...
ಚೆಂಡಿಗರ್, ದೆಹಲಿ, ಹರಿಯಾನ, ಹಿಮಾಚಲ ಪ್ರದೇಶ, ಪಂಜಾಬ್, ರಾಜಸ್ಥಾನ, ಉತ್ತರ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಉತ್ತರಾಂಚಲ್

ದಕ್ಷಿಣವಲಯ
...
ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕ, ಕೇರಳ, ಲಕ್ಷದ್ವೀಪ ಮತ್ತು ಪಾಂಡಿಚೇರಿ.

ಪೂರ್ವವಲಯ
...
ಬಿಹಾರ, ಒರಿಸ್ಸಾ, ಪಶ್ಚಿಮಬಂಗಾಳ, ಸಿಕ್ಕಿಂ, ಜಾರ್ಖಂಡ್, ಅಂಡಮಾನ್-ನಿಕೊಬಾರ್

ಪಶ್ಚಿಮವಲಯ
...
ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ, ದಾದ್ರಾ-ನಗರ್‍ಹವೇಲಿ, ಗೋವಾ, ಡಮನ್ ಮತ್ತು ಡಯೂ, ಛತ್ತೀಸ್‍ಗಢ

ಈಶಾನ್ಯವಲಯ
...
ಅಸ್ಸಾಮ್, ಮಣಿಪುರ, ಮೇಘಾಲಯ, ನಾಗಾಲ್ಯಾಂಡ್, ಮಿಝೋರಾಮ್, ತ್ರಿಪುರ, ಅರುಣಾಚಲ ಪ್ರದೇಶ.

ಮಹಾರಾಷ್ಟ್ರದ ತಾರಾಪುರ ಎಂಬಲ್ಲಿ 400 ಮೆಗಾವಾಟ್ ಸಾಮಥ್ರ್ಯದ ಪರಮಾಣು ವಿದ್ಯುತ್‍ಸ್ಥಾವರ ನಿರ್ಮಾಣದ ಆರಂಭವೇ ಮೂರನೆಯ ಪಂಚವಾರ್ಷಿಕ ಯೋಜನಾವಧಿಯ ಸಾಧನೆ.
1966-69 ಅವಧಿಯ ಮೂರು ವಾರ್ಷಿಕ ಯೋಜನೆಯಲ್ಲಿ ವಿದ್ಯುದುತ್ಪಾದನೆ ಹಾಗೂ ಸಾಮಥ್ರ್ಯದ ಏರಿಕೆ ತೀವ್ರವಾಗಿ ಆಗತೊಡಗಿತು. ನಾಲ್ಕನೆಯ ಪಂಚವಾರ್ಷಿಕ ಯೋಜನೆಯ ಅವಧಿಯಲ್ಲಿ ಉತ್ತರವಲಯದಲ್ಲಿ ಸಲಾಲ್, ಬೈರಾಸಿಯೂಲ್ ಜಲವಿದ್ಯುದ್ಯೋಜನೆಗಳು, ಈಶಾನ್ಯ ವಲಯದಲ್ಲಿ ಲೋಕತಾಕ್ ಜಲವಿದ್ಯುದ್ಯೋಜನೆ ಮತ್ತು ಕೇಂದ್ರ ವಿಭಾಗದಲ್ಲಿ ಬದರ್‍ಪುರ ಶಾಖವಿದ್ಯುತ್ ಸ್ಥಾವರ ನಿರ್ಮಾಣಗಳನ್ನು ಕೈಗೆತ್ತಿಕೊಳ್ಳಲಾಯಿತು. ವಿದ್ಯುದ್ಯೋಜನೆಗಳಲ್ಲಿ ಬೇಕಾಗುವ ಭಾರಿ ವಿದ್ಯುತ್ ಯಂತ್ರೋಪಕರಣಗಳಿಗಾಗಿ ಭಾರತ ಸ್ವಾವಲಂಬನೆಯ ಹಾದಿ ಹಿಡಿಯಿತು. ಭೂಪಾಲಿನಲ್ಲಿರುವ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಕಾರ್ಖಾನೆ ವಿದ್ಯುದ್ಯೋಜನೆಗಳಿಗೆ ಬೇಕಾಗುವ ವಿದ್ಯುಜ್ಜನಕಗಳು, ತಿರುಬಾನಿಗಳು, ಟ್ರಾನ್ಸ್ ಫಾರ್ಮರುಗಳು, ಸ್ವಿಚ್‍ಗಿಯರ್ ಮುಂತಾದ ನಿಯಂತ್ರಣ ವ್ಯವಸ್ಥೆಗಳನ್ನು ತಯಾರಿಸುತ್ತದೆ. 1969ರಿಂದ ತಾರಾಪುರ ಪರಮಾಣು ವಿದ್ಯುತ್ ಸ್ಥಾವರ ಕಾರ್ಯಾಚರಣೆಗೆ ತೊಡಗಿದೆ.
ಹೊಸನಿಗಮಗಳ ರಚನೆ : ಐದನೆಯ ಪಂಚವಾರ್ಷಿಕ ಯೋಜನೆಯಲ್ಲಿ ವಿದ್ಯುತ್ ಸಾಮಥ್ರ್ಯ ಯೋಜನೆಗಳ ನಿರ್ಮಾಣಕಾರ್ಯ ಭರದಿಂದ ಸಾಗಲು ಮತ್ತು ವಿದ್ಯುದುತ್ಪಾದನೆಯನ್ನು ಹೆಚ್ಚಿಸಲು ಎರಡು ಹೊಸ ನಿಗಮಗಳನ್ನು ರಚಿಸಿದ್ದು (1976) ಒಂದು ವಿಶೇಷ : ನ್ಯಾಶನಲ್ ಥರ್ಮಲ್ ಪವರ್ ಕಾರ್ಪೊರೇಷನ್ ಹಾಗೂ ನ್ಯಾಶನಲ್ ಹೈಡ್ರೊಪವರ್ ಕಾರ್ಪೊರೇಷನ್. ಸೂಪರ್‍ಥರ್ಮಲ್ ಪವರ್ ಸ್ಟೇಷನುಗಳ ನಿರ್ಮಾಣ ಕಾರ್ಯವನ್ನು ನ್ಯಾಶನಲ್ ಥರ್ಮಲ್ ಕಾರ್ಪೊರೇಶನ್ ವಶಕ್ಕೆ ಬಿಟ್ಟು ಕೊಡಲಾಯಿತು. ಅಲ್ಲದೆ ಹೊಸ ಯೋಜನೆಗಳನ್ನು ಅದು ಕೈಗೆತ್ತಿಕೊಂಡಿತು. 1977ರಲ್ಲಿ 200 ಮೆಗಾವಾಟ್ ಸಾಮಥ್ರ್ಯದ ಒಂದು ಘಟಕ ಉತ್ತರ ಪ್ರದೇಶದ ಒಬ್ರಾ ಶಾಖವಿದ್ಯುತ್ ಸ್ಥಾವರದಲ್ಲಿ ಕಾರ್ಯ ಆರಂಭಿಸಿತು. ಹೀಗೆಯೇ 1977ರಲ್ಲಿ 500 ಮೆಗಾವಾಟ್ ಸಾಮಥ್ರ್ಯದ ಶಾಖ ಯೋಜನೆಯನ್ನು ಮುಂಬಯಿಯ ಟ್ರೋಂಬೆಯಲ್ಲಿ ತೆಗೆದುಕೊಳ್ಳಲಾಯಿತು.
ಆರನೆಯ ಯೋಜನೆಯ ಅವಧಿಯಲ್ಲಿ ಲಾಭ ಪಡೆಯುವ ಉದ್ದೇಶದಿಂದ ಐದನೆಯ ಪಂಚವಾರ್ಷಿಕ ಯೋಜನೆಯಲ್ಲಿ ಮುಂಗಡವಾಗಿಯೇ ಕೆಲವು ಯೋಜನೆಗಳಿಗೆ ಅಸ್ತಿಭಾರ ಹಾಕಲಾಯಿತು. 1978ರಲ್ಲಿ ಭಾರತದ ಗಮನಾರ್ಹ ಸಾದನೆ ಎಂದರೆ 400 ಕಿಲೊವಾಟ್ ಸಾಮಥ್ರ್ಯದ ಪ್ರಸರಣ ತಂತಿಗಳನ್ನು ಮೊದಲ ಬಾರಿಗೆ ಹಾಕಿದ್ದು. ಓಬ್ರಾಸುಲ್ತಾನ್‍ಪುರ ಮಾರ್ಗದ ಎಲ್ಲ ಮುಖ್ಯ ವಿದ್ಯುತ್ ವ್ಯವಸ್ಥೆಗಳಲ್ಲಿಯೂ ಹೆಚ್ಚಿನ ಸಾಮಥ್ರ್ಯದ ಪ್ರಸರಣ ತಂತಿಗಳನ್ನು ಹಾಕಲು ಕ್ರಮತೆಗೆದುಕೊಳ್ಳಲಾಯಿತು. ಪ್ರತಿ ವಲಯದಲ್ಲಿಯೂ ವಿದ್ಯುತ್ ವಿತರಣ ಕೇಂದ್ರಗಳನ್ನು ಸ್ಥಾಪಿಸಲು ತೊಡಗಿದ್ದು 1970ರ ದಶಕದಲ್ಲಿ ದಕ್ಷಿಣ ಭಾರತದಲ್ಲಿ ವಿದ್ಯುದುತ್ಪಾದನೆಗಾಗಿಯೇ ಮೀಸಲಾದ ಸಂಸ್ಥೆಯೊಂದರ ಉಗಮ 1970ರಲ್ಲಿ ಆಯಿತು : ಕರ್ನಾಟಕ ವಿದ್ಯುತ್ ನಿಗಮ. ಇದರ ಸ್ಥಾಪನೆಗೆ ಮೊದಲು ಉತ್ಪಾದನೆ ಹಾಗೂ ವಿತರಣೆ ಈ ಎರಡೂ ಕಾರ್ಯಗಳನ್ನು ಕರ್ನಾಟಕ ರಾಜ್ಯ ವಿದ್ಯುಚ್ಛಕ್ತಿ ಮಂಡಳಿ (ಆಗ ಮೈಸೂರು ರಾಜ್ಯ ವಿದ್ಯುಚ್ಛಕ್ತಿ ಮಂಡಳಿ ಮತ್ತು ಈಗ ಕರ್ನಾಟಕ ವಿದ್ಯುಚ್ಛಕ್ತಿ ಪ್ರಸರಣ ನಿಗಮ) ನೋಡಿ ಕೊಳ್ಳುತ್ತಿತ್ತು. ಕರ್ನಾಟಕ ವಿದ್ಯುತ್‍ನಿಗಮ ಕಾರ್ಯಾಚರಣೆಗೆ ತೊಡಗಿದ ಹೊಸದರಲ್ಲಿ ಕೈಗೆತ್ತಿಕೊಂಡ ಕಾಮಗಾರಿ ಎಂದರೆ ಕಾಳಿನದಿ ಜಲ ವಿದ್ಯುಚ್ಛಕ್ತಿಯೋಜನೆ. ಇದರ ಎರಡು ಹಂತದ ಕಾರ್ಯಗಳು ಪೂರಯಿಸಿವೆ.
ವಿದ್ಯುದುತ್ಪಾದನೆಗಾಗಿ ಕೆಲಸ ಮಾಡುತ್ತಿರುವ ಭಾರತದ ಸಂಸ್ಥೆಗಳು ಹೀಗಿವೆ : ಕೇಂದ್ರ ವಿದ್ಯುತ್ ಪ್ರಾಧಿಕಾರ, ಐದು ರಾಜ್ಯ ವಿದ್ಯುಚ್ಛಕ್ತಿ ಮಂಡಳಿಗಳು ನ್ಯಾಶನಲ್ ಥರ್ಮಲ್ ಪವರ್ ಕಾರ್ಪೊರೇಶನ್, ನ್ಯಾಶನಲ್ ಹೈಡ್ರೊಪವರ್ ಕಾರ್ಪೊರೇಶನ್, ನಾರ್ತ್ ಈಸ್ಟರ್ನ್ ಎಲೆಕ್ಟ್ರಿಕ್ ಪವರ್ ಕಾರ್ಪೊರೇಶನ್, ಕರ್ನಾಟಕ ವಿದ್ಯುತ್ ನಿಗಮ, ನೈವೇಲಿ ಲಿಗ್ನೈಟ್ ಕಾರ್ಪೊರೇಶನ್, ಪರಮಾಣುಶಕ್ತಿ ಇಲಾಖೆ, ತುಂಗ ಭದ್ರಾ ಮಂಡಳಿ ಹಾಗೂ ದಾಮೋದರ ಕಣಿವೆ ಕಾರ್ಪೊರೇಶನ್, ಭಾಕ್ರಾಭೀಸ್ ಮ್ಯಾನೇಜ್ ಮೆಂಟ್ ಮಂಡಲಿ. ಎರಡು ಜಂಟಿ ವಿದ್ಯುತ್ ನಿಗಮಗಳು, ಸಟ್ಲಜ್ ಜಲವಿದ್ಯುತ್ ನಿಗಮ ಹಾಗೂ ತೆಹರಿ ಜಲ ಅಭಿವೃದ್ಧಿ ನಿಗಮ ಇವು ಕ್ರಮವಾಗಿ ಹಿಮಾಚಲ ಪ್ರದೇಶ ರಾಜ್ಯದಲ್ಲಿ ನಾಥ್‍ಪಾ ಜಕಿ, ವಿದ್ಯುತ್ ಯೋಜನೆ ಹಾಗೂ ಉತ್ತರಾಂಚಲದಲ್ಲಿ ತೆಹರಿ ಜಲವಿದ್ಯುತ್ ಸಂಕೀರ್ಣದ ಯೋಜನೆಗಳನ್ನು ಕಾರ್ಯಗತ ಗೊಳಿಸುವಲ್ಲಿ ನಿರತವಾಗಿರುತ್ತವೆ.
ಜಲವಿದ್ಯುತ್, ಶಾಖವಿದ್ಯುತ್ ಹಾಗೂ ಪರಮಾಣು ವಿದ್ಯುತ್ ಸಂಪನ್ಮೂಲಗಳ ವಿವರಗಳು ಹೀಗಿವೆ: ಜಲವಿದ್ಯುತ್ ಸಂಪನ್ಮೂಲಗಳು-ಭಾರತದ ಜಲವಿದ್ಯುತ್ ಸಾಮಥ್ರ್ಯ 411 ಲಕ್ಷ ಕಿಲೊವಾಟುಗಳೆಂದು ಅಂದಾಜು. ಇದರಲ್ಲಿ 2004ರ ವೇಳೆಗೆ ದೊರಕಿಸಿಕೊಡಿರುವ ಜಲವಿದ್ಯುತ್ ಸಾಮಥ್ರ್ಯ 295-06ಲಕ್ಷ ಕಿಲೊವಾಟ್ ಮಾತ್ರ.
ನದಿ ಮೂಲಗಳ ವಿವರ ಹೀಗಿದೆ :
ನದಿಗಳು

ವಿದ್ಯುತ್ ಸಾಮಥ್ರ್ಯ
(ಲಕ್ಷ ಕಿಲೊವಾಟುಗಳು)

ಪಶ್ಚಿಮಾಭಿಮುಖವಾಗಿ ಹರಿಯುವ
ಪಶ್ಚಿಮ ಘಟ್ಟಗಳ ನದಿಗಳು

...

43

ಪೂರ್ವಾಭಿಮುಖವಾಗಿ ಹರಿಯುವ
ದಕ್ಷಿಣ ಭಾರತದ ನದಿಗಳು

...

89

ಮಧ್ಯಭಾರತದ ನದಿಗಳು ಗಂಗಾನದಿ
...
43

ಬ್ರಹ್ಮಪುತ್ರ, ಮಣಿಪುರ ಮತ್ತು ತಯಾವೊ
...
125

ಸಿಂಧು
...
66

	ಶಾಖವಿದ್ಯುತ್‍ಸಾಮಥ್ರ್ಯ: ಭಾರತಕ್ಕೆ ಸ್ವಾತಂತ್ರ್ಯ ಬಂದ ಹೊಸದರಲ್ಲಿ ಹೆಚ್ಚು ಸಾಮಥ್ರ್ಯದ ಶಾಖವಿದ್ಯುತ್ ಘಟಕವೆಂದರೆ 30 ಮೆಗಾವಾಟ್ ಸಾಮಥ್ರ್ಯದ್ದಾಗಿತ್ತು. 50 ಮೆಗಾವಾಟ್ ಸಾಮಥ್ರ್ಯದ ಘಟಕವನ್ನು 1950ರಲ್ಲಿ ಸ್ಥಾಪಿಸಲಾಯಿತು. 1960-61ರಿಂದೀಚೆಗೆ ಇಂಧನ ಬಳಸಿ ದೊಡ್ಡ ಘಟಕಗಳನ್ನು ಸ್ಥಾಪಿಸಲಾಗಿದೆ. 1964ರಲ್ಲಿ ದಾಮೋದರ್ ಕಣಿವೆ ನಿಗಮದ ಆಶ್ರಯದಲ್ಲಿ ಚಂದ್ರಾಪುರ ಎಂಬಲ್ಲಿ 140 ಮೆಗಾವಾಟ್ ಸಾಮಥ್ರ್ಯದ ಘಟಕವನ್ನು ಸ್ಥಾಪಿಸಲಾಯಿತು. ಅಲ್ಲಿಯತನಕ 50ರಿಂದ 60 ಮೆಗಾವಾಟ್ ಸಾಮಥ್ರ್ಯದ ಘಟಕಗಳು ಸಾಮಾನ್ಯವಾಗಿದ್ದುವು. 1977ರಲ್ಲಿ ಉತ್ತರ ಪ್ರದೇಶದ ಓಬ್ರಾ ಶಾಖ ವಿದ್ಯುದಾಗಾರದಲ್ಲಿ 200 ಮೆಗಾವಾಟ್ ಸಾಮಥ್ರ್ಯದ ಘಟಕದ ಸ್ಥಾಪನೆಯಾಯಿತು. ಆರನೆಯ ಪಂಚವಾರ್ಷಿಕ ಯೋಜನೆ ಅವಧಿಯಲ್ಲಿ 200ರಿಂದ 210 ಮೆಗಾವಾಟ್ ಸಾಮಥ್ರ್ಯದ ಘಟಕಗಳ ಸ್ಥಾಪನೆ ಹೆಚ್ಚಾಗಿರುತ್ತದೆ. ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಸ್ಥಾಪಿಸಲಾಗಿರುವ ರಾಯಚೂರು ಶಾಖೋತ್ಪನ್ನವಿದ್ಯುದಾಗಾರದಲ್ಲಿ ಎರಡು ಘಟಕಗಳು ಸೆರಿದ್ದವು. ಪ್ರತಿಯೊಂದು ಘಟಕದ ಸಾಮಥ್ರ್ಯ 210 ಮೆಗಾವಾಟುಗಳು. ಪ್ರಸ್ತುತ, ಅತಿ ದೊಡ್ಡ ಜಲವಿದ್ಯುತ್ ಘಟಕವೆಂದರೆ ಬೀಸ್ ನದಿ ಯೋಜನೆಯಲ್ಲಿ ದೇಹಾರ್ ಎಂಬಲ್ಲಿ ಸ್ಥಾಪನೆಯಾಗಿರುವ 165 ಮೆಗಾವಾಟ್ ಸಾಮಥ್ರ್ಯದ ವಿದ್ಯುತ್ ಘಟಕ. ಇದರ ತಯಾರಕರು ಭೂಪಾಲಿನ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಕಾರ್ಖಾನೆ. 2004ರ ವೇಳೆಗೆ ಭಾರತದ ಒಟ್ಟು ಶಾಖೋತ್ಪನ್ನ ವಿದ್ಯುತ್ ಸಾಮಥ್ರ್ಯ 65000 ಮೆಗಾವಾಟುಗಳು.
ಪರಮಾಣು ವಿದ್ಯುತ್ ಸ್ಥಾವರಗಳು: ಈ ದಿಶೆಯಲ್ಲಿ ಭಾರತ ಸಾಧಿಸಿರುವುದು ತೀರ ಅಲ್ಪ. ಪರಮಾಣು ಇಲಾಖೆ ಪರಮಾಣು ವಿದ್ಯುದಾಗಾರಗಳ ನಿರ್ಮಾಣವನ್ನೂ ನಿರ್ವಹಣೆಯನ್ನೂ ವಹಿಸಿಕೊಂಡಿದೆ. 2004ರ ವೇಳೆಗೆ ಭಾರತದ ಪರಮಾಣು ವಿದ್ಯುತ್ ಸಾಮಥ್ರ್ಯ 2720 ಮೆಗಾವಾಟುಗಳು. ಸ್ಟೇನಿನಂಥ ಸಣ್ಣ ದೇಶದಲ್ಲಿ ಕೂಡ ಇದು 2000 ಮೆಗಾವಾಟುಗಳಷ್ಟಿದೆ.
ಬಿಹಾರ, ರಾಜಸ್ಥಾನ ಮತ್ತು ತಮಿಳುನಾಡಿನಲ್ಲಿ ಯುರೇನಿಯಮ್ ದೊರಕಿಸಿ ಕೊಳ್ಳಬಹುದೆಂದು ಅಂದಾಜು ಮಾಡಲಾಗಿದೆ. ಕೇರಳ, ರಾಂಚಿ, ಬಿಹಾರ, ಬಂಗಾಳಗಳಲ್ಲಿ ಒಟ್ಟು 50,000 ಟನ್ನುಗಳಷ್ಟು ತೋರಿಯಮ್ ದೊರೆಯುತ್ತದೆ. ಯುರೇನಿಯಮ್ ಹಾಗೂ ತೋರಿಯಮ್‍ಗಳು ಪರಮಾಣು ವಿದಳನ ಕ್ರಿಯೆಗೆ ಬೇಕಾಗುವ ಧಾತುಗಳು. ಪ್ರಸ್ತುತ ರಾಜಸ್ಥಾನ, ಗುಜರಾತ್, ಉತ್ತರಪ್ರದೇಶ, ಮಹಾರಾಷ್ಟ್ರ, ಕರ್ನಾಟಕ ಹಾಗೂ ತಮಿಳುನಾಡುಗಳಲ್ಲಿ ಪರಮಾಣು ವಿದ್ಯುತ್‍ಸ್ಥಾವರಗಳು ಸ್ಥಾಪನೆಯಾಗಿವೆ. 2000ದಲ್ಲಿ ಕರ್ನಾಟಕದ ಕೈಗಾದ ಪರಮಾಣುವಿದ್ಯುತ್ ಸ್ಥಾವರ ಕಾರ್ಯಾರಂಭ ಮಾಡಿದೆ.
ಪ್ರಸ್ತುತ 2003-2004ರ ಆರ್ಥಿಕ ವರ್ಷದ ಕೊನೆಗೆ ಭಾರತದ ವಿವಿಧ ಪ್ರದೇಶಗಳಲ್ಲಿಯ ಸಾಮಥ್ರ್ಯವನ್ನು ಮುಂದಿನ ಪುಟದಲ್ಲಿಯ ಕೋಷ್ಟಕದಲ್ಲಿ ಕೊಡಲಾಗಿದೆ.
ಕರ್ನಾಟಕದಲ್ಲಿ ವಿದ್ಯುಚ್ಛಕ್ತಿ ಉತ್ಪಾದನೆ : ಪ್ರಸ್ತುತ ಭಾರತದಲ್ಲಿಯ ಜಲವಿದ್ಯುತ್ ಸಾಮಥ್ರ್ಯದಲ್ಲಿ ಕರ್ನಾಟಕಕ್ಕೆ ಪ್ರಥಮ ಸ್ಥಾನ ಸಲ್ಲುತ್ತದೆ. ರಾಜ್ಯದ ಒಟ್ಟು ಸಾಮಥ್ರ್ಯ 2003-2004ರ ಅಧಿಕ ವರ್ಷದ ಅಂತ್ಯದ ವೇಳೆಗೆ 5,327 ಮೆಗಾವಾಟುಗಳು. ರಾಯಚೂರಿನಲ್ಲಿ ಸ್ಥಾಪಿಸಲಾಗಿರುವ ಶಾಖೋತ್ಪನ್ನ ವಿದ್ಯುದಾಗಾರದ ಇಂದಿನ ವಿದ್ಯುತ್ ಸಾಮಥ್ರ್ಯ 1470 ಮೆಗಾವಾಟುಗಳು. 210 ಮೆಗಾವಾಟಿನ 7 ಘಟಕಗಳನ್ನು ಇಲ್ಲಿ ಸ್ಥಾಪಿಸಲಾಗಿದೆ. ಆಂಧ್ರಪ್ರದೇಶದ ಸಿಂಗರೇಣಿ ಕಲ್ಲಿದ್ದಲ ಒರಿಸ್ಸಾದ ಗಣಿಗಳಿಂದ  ಕಲ್ಲಿದ್ದಲನ್ನು ದೊರಕಿಸಿಕೊಳ್ಳಲಾಗುತ್ತಿದೆ. ಗಣಿಗಳು, ಮಹಾರಾಷ್ಟ್ರ ಹಾಗೂ ಹೊರದೇಶಗಳಿಂದ ಕಲ್ಲಿದ್ದಲು ಆಮದು ಸಹ ಮಾಡಿಕೊಳ್ಳಲಾಗುತ್ತಿದೆ. ರಾಯಚೂರು ಶಾಖೋತ್ಪನ್ನ ವಿದ್ಯುದಾಗರದಲ್ಲಿ 210 ಮೆಗಾವಾಟ್ ಸಾಮಥ್ರ್ಯದ ಎಂಟನೆ ಘಟಕವನ್ನು ಸ್ಥಾಪಿಸುವ ಕಾರ್ಯಕ್ರಮವಿದೆ. ಬಳ್ಳಾರಿಯಲ್ಲಿ 500ಮೆಗಾವಾಟ್ ಸಾಮಥ್ರ್ಯದ ಘಟಕವೊಂದನ್ನು ಸ್ಥಾಪಿಸಲಾಗುತ್ತದೆ.
ಕರ್ನಾಟಕದಲ್ಲಿ 1902ರಿಂದಲೇ ಶಿವಸಮುದ್ರದಲ್ಲಿ (ಮಂಡ್ಯ ಜಿಲ್ಲೆ) ವಿದ್ಯುದಾಗಾರವನ್ನು ಸ್ಥಾಪಿಸುವುದರ ಮೂಲಕ ಜಲಶಕ್ತಿಯನ್ನು ವಿದ್ಯುದುತ್ಪಾದನೆಗೆ ಬಳಸಿ ಕೊಳ್ಳಲಾಗಿದೆ. ಈ ರಾಜ್ಯದಲ್ಲಿ ಎರಡನೆಯ ವಿದ್ಯುದ್ಯೋಜನೆಯ ಸ್ಥಾಪನೆ 1940 ರಲ್ಲಾಯಿತು-ಮದ್ದೂರಿನಿಂದ 38 ಕಿಮೀ ದೂರದಲ್ಲಿರುವ ಶಿಂಷಾಪುರದ ವಿದ್ಯುದಾಗಾರದಲ್ಲಿ. ಇಲ್ಲಿ 8.6 ಮೆಗಾವಾಟುಗಳ ಎರಡು ಘಟಕಗಳನ್ನು ಸ್ಥಾಪಿಸಲಾಗಿದೆ. ಜೋಗಜಲಪಾತದ (ಶಿವಮೊಗ್ಗ ಜಿಲ್ಲೆ) ಬಳಿ ಬರುವ ಮಹಾತ್ಮಗಾಂಧಿ ಜಲವಿದ್ಯುದುತ್ಪಾದನಾ ಕೇಂದ್ರದ ಮೊದಲ ಹಂತದ ಕೆಲಸ 1947ರ ವೇಳೆಗೆ ಮುಗಿಯಿತು. 12 ಮೆಗಾವಾಟುಗಳ ನಾಲ್ಕು ಘಟಕಗಳನ್ನು ಇಲ್ಲಿ ಸ್ಥಾಪಿಸಲಾಯಿತು. ಪ್ರಸ್ತುತ ಈ ವಿದ್ಯುದುತ್ಪಾದನಾ ಕೇಂದ್ರದ ಸಾಮಥ್ರ್ಯ 120 ಮೆಗಾವಾಟುಗಳು.
ಬಳ್ಳಾರಿ ಜಿಲ್ಲೆಯಲ್ಲಿ ತುಂಗಭದ್ರಾ ಅಣೆಕಟ್ಟು ಯೋಜನೆಯ ಬಲದಂಡೆಯಲ್ಲಿ ಹಾಗೂ ಹಂಪಿನಾಲೆ ಬಳಿ ನಿರ್ಮಿಸಲಾಗಿರುವ ವಿದ್ಯುದಾಗಾರಗಳಿಂದ (1957) ಕರ್ನಾಟಕಕ್ಕೆ 14.4 ಮೆಗಾವಾಟ್ ವಿದ್ಯುಚ್ಛಕ್ತಿ ದೊರೆಯುತ್ತಿದೆ. ತುಂಗಭದ್ರಾ ಬಲದಂಡೆಯ ವಿದ್ಯುದಾಗಾರದಲ್ಲಿ 9 ಮೆಗಾವಾಟ್ ಸಾಮಥ್ರ್ಯದ ನಾಲ್ಕು ವಿದ್ಯುದಾಗಾರಗಳನ್ನು ಸ್ನಾಪಿಸಲಾಗಿದೆ. 1962ರಲ್ಲಿ ತುಂಗಭದ್ರಾ ಎಡದಂಡೆಯಲ್ಲಿಯ ಮುನಿರಾಬಾದ್ ವಿದ್ಯುತ್ ಸ್ಥಾವರ ಉತ್ಪಾದನೆಗೆ ತೊಡಗಿತು. ಇಲ್ಲಿ 9 ಮೆಗಾವಾಟಿನ ಮೂರು ವಿದ್ಯುಜ್ಜನಕಗಳಿವೆ. ಒಟ್ಟು ಸಾಮಥ್ರ್ಯ 27 ಮೆಗಾವಾಟುಗಳು. ಭದ್ರಾಜಲಾಶಯದ ಎಡ ಹಾಗೂ ಬಲದಂಡೆಗಳ ಮತ್ತು ನದಿ ಪಾತ್ರಗಳಲ್ಲಿ ವಿದ್ಯುನಾಕಾರಗಳನ್ನು ಸ್ಥಾಪಿಸಲಾಗಿದೆ. ಇದರಿಂದ ಶಿವಮೊಗ್ಗ ಮತ್ತು ಚಿಕ್ಕಮಂಗಳೂರು ಜಿಲ್ಲೆಗಳಲ್ಲಿ ವಿದ್ಯುದಾಗಾರ ಕೆಲಸ ಮಾಡುತ್ತಿದೆ. ಇಲ್ಲಿನ ಒಟ್ಟು ಸಾಮಥ್ರ್ಯ 39.2 ಮೆಗಾವಾಟುಗಳು.
1958ರ ತರುವಾಯ ಪ್ರಾರಂಭವಾದ ಶರಾವತಿ ವಿದ್ಯುದಾಗಾರದ (ಶಿವಮೊಗ್ಗ ಜಿಲ್ಲೆ) ನಿರ್ಮಾಣಕಾರ್ಯ ಕರ್ನಾಟಕದ ಹೆಮ್ಮೆಯ ಸಾಧನೆ. ಆಗ್ನೇಯ ಏಷ್ಯದಲ್ಲಿಯೇ ಇದು ಪ್ರಥಮ ಎನ್ನಲಾಗಿದೆ. ಇದರ ಒಟ್ಟು ಸಾಮಥ್ರ್ಯ 891 ಮೆಗಾವಾಟುಗಳು. ಇಲ್ಲಿ 89.1 ಮೆಗಾವಾಟಿನ 10 ಘಟಕಗಳು ಕೆಲಸ ಮಾಡುತ್ತಿವೆ. ಈ ಘಟಕಗಳ ವಿದ್ಯುತ್ ಸಾಮಥ್ರ್ಯವನ್ನು ಕಳೆದ ದಶಕದಲ್ಲಿ 103 ಮೆಗಾವಾಟ್‍ಗೆ ಏರಿಸಲಾಗಿದೆ. ಕೊನೆಯ ಎರಡು ಘಟಕಗಳು ತಯಾರಾದದ್ದು ಭಾರತದಲ್ಲಿ. ಇಲ್ಲಿ ಶರಾವತಿ ನದಿ ನೀರನ್ನು ಮೂರು ಹಂತಗಳಲ್ಲಿ ಬಳಸಿಕೊಳ್ಳಲಾಗಿದೆ. ಈ ಯೋಜನೆಯಲ್ಲಿ ಲಿಂಗನಮಕ್ಕಿಯೇ ಪ್ರಮುಖ ಜಲಾಶಯ. ಲಿಂಗನ ಮಕ್ಕಿ ಅಣೆಕಟ್ಟು ಬುಡದಲ್ಲಿ ವಿದ್ಯುದಾಗಾರವಿದ್ದು 55 ಮೆಗಾವಾಟ್‍ನ ಎರಡು ಘಟಕಗಳಿವೆ.
ಉತ್ತರ ಕನ್ನಡ ಜಿಲ್ಲೆಯ ಕಾಳಿನದಿ ಯೋಜನೆ 1971ರಲ್ಲಿ ಆರಂಭವಾಯಿತು. ಮೂರು ಹಂತಗಳಲ್ಲಿ ಇದನ್ನು ಪೂರೈಸಲಾಗುತ್ತದೆ. ಮೊದಲನೆಯ ಹಂತದ ಮುಖ್ಯ ವಿದ್ಯುದಾಗಾರದ ಹೆಸರು ನಾಗಝರಿ, ಇಲ್ಲಿ 135 ಮೆಗಾವಾಟ್ ಸಾಮಥ್ರ್ಯದ ಆರು ಘಟಕಗಳು ಕೆಲಸ ಮಾಡುತ್ತಿವೆ. ಒಟ್ಟು ಸಾಮಥ್ರ್ಯ 810 ಮೆಗಾವಾಟುಗಳು. ಈಚೆಗೆ ಈ ಘಟಕಗಳ ಸಾಮಥ್ರ್ಯವನ್ನು 150 ಮೆಗಾವಾಟ್‍ಗಳಿಗೆ ಏರಿಸಲಾಗಿದೆ. ಸೂಪಾ ತಾಲ್ಲೂಕಿನಲ್ಲಿ ಸೂಪಾ ಅಣೆಕಟ್ಟನ್ನು ಕಾಳಿ ನದಿಗೆ ಅಡ್ಡವಾಗಿ ಕಟ್ಟಲಾಗಿದೆ. ಅಣೆಕಟ್ಟು ಬಳಿ 50 ಮೆಗಾವಾಟ್ ಸಾಮಥ್ರ್ಯದ ಎರಡು ಘಟಕಗಳನ್ನು ಸ್ಥಾಪಿಸಲಾಗಿದೆ. ಕಾಳಿನದಿ ಮೊದಲ ಹಂತದಲ್ಲಿ ವಿದ್ಯುಚ್ಛಕ್ತಿ ಉತ್ಪಾದನೆ ವರ್ಷಕ್ಕೆ 4112 ದಶಲಕ್ಷ ಯೂನಿಟ್ಟುಗಳಷ್ಟಿರುತ್ತದೆ. ಕಾಳಿ ನದಿ ಎರಡನೆಯ ಹಂತದ ಕೆಲಸಗಳೂ ಮುಗಿದಿದ್ದು. ಈ ಹಂತದಲ್ಲೆ ಕೊಡಸಳ್ಳಿ ಮತ್ತು ಕದ್ರಾ ವಿದ್ಯುದಾಗಾರಗಳನ್ನು ಸ್ಥಾಪಿಸಲಾಗಿದ್ದು. ಒಟ್ಟು ವಿದ್ಯುತ್ ಸಾಮಥ್ರ್ಯ 300 ಮೆಗಾವಾಟುಗಳು.
ವರ್ಷಕ್ಕೆ 1100 ದಶಲಕ್ಷ ಯೂನಿಟ್ ವಿದ್ಯುತ್ತಿನ ಗಳಿಕೆ ಇರುವ ಮೊದಲ ಹಂತ ಪೂರಯಿಸಿದೆ. ಹೊಸಂಗಡಿ (ಉಡುಪಿ ಜಲ್ಲೆ)ಯಲ್ಲಿ 115 ಮೆಗಾವಾಟ್‍ಗಳ ಎರಡು ವಿದ್ಯುತ್ ಘಟಕಗಳನ್ನು ಭೈಗಭನ ವಿದ್ಯುದಾಗಾರದಲ್ಲಿ ಸ್ಥಾಪಿಸಲಾಗಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮಾಣಿ ಎಂಬಲ್ಲಿ ಕಟ್ಟಿರುವ ಅಣೆಕಟ್ಟು ಈ ವಿದ್ಯುದಾಗಾರಕ್ಕೆ ನೀರು ಪೂರಯಿಸುತ್ತಿದ್ದು ಅಣೆಕಟ್ಟು ಬುಡದಲ್ಲಿ 4.5 ಮೆಗಾವಾಟ್‍ಗಳ ಎರಡು ಘಟಕಗಳಿರುವ ವಿದ್ಯುದಾಗಾರವಿದೆ. ಲಿಂಗನಮಕ್ಕಿ ಜಲಾಶಯಕ್ಕೆ ಹೆಚ್ಚುವರಿ ನೀರನ್ನು ಒದಗಿಸುವ ಸಲುವಾಗಿ ಚಕ್ರನದಿ ಯೋಜನೆ ಕಾರ್ಯ ಗತವಾಗಿ ಇದರಲ್ಲಿ ಎರಡು ಅಣೆಕಟ್ಟುಗಳನ್ನು ಕಟ್ಟಲಾಗಿದೆ. ಸಾವೆಹಕ್ಲು ಅಣೆಕಟ್ಟು ಹಾಗೂ ಚಕ್ರಾ. ಚಕ್ರಾನದಿ ಯೋಜನೆಯಿಂದ ವಾರ್ಷಿಕವಾಗಿ 508 ದಶಲಕ್ಷ ಯೂನಿಟ್ಟುಗಳ ವಿದ್ಯುತ್ ಪೂರೈಕೆ ಆಗಲಿದೆ. ಬೆಳಗಾವಿ ಜಿಲ್ಲೆಯಲ್ಲಿ ಘಟಪ್ರಭ ಅಣೆಕಟ್ಟಿನ ಬಳಿ 16 ಮೆಗಾವಾಟ್ ಸಾಮಥ್ರ್ಯದ ಎರಡು ಘಟಕಗಳನ್ನು ಸ್ಥಾಪಿಸಲಾಗಿದೆ.
ಬಿಜಾಪುರ ಜಿಲ್ಲೆಯ ಆಲಮಟ್ಟಿ ಎಂಬಲ್ಲಿ ಕೃಷ್ಣಾ ನದಿಗೆ ಕಟ್ಟಲಾಗಿರುವ ಅಣೆಕಟ್ಟು ಬಳಿ ಸ್ಥಾಪಿಸಲಾಗಿರುವ ವಿದ್ಯುದಾಗರದಲ್ಲಿ 15 ಮೆಗಾವಾಟ್‍ನ ಒಂದು ಘಟಕ ಹಾಗೂ ತಲಾ 55 ಮೆಗವಾಟ್‍ಗಳ ಐದು ಘಟಕಗಳನ್ನು ಸ್ಥಾಪಿಸಲಾಗಿದೆ. ಆಲಮಟ್ಟಿ ಜಲ ವಿದ್ಯುದಾಗಾರದ ಒಟ್ಟು ಸ್ಥಾಪಿತ ಸಾಮಥ್ರ್ಯ 290 ಮೆಗಾವಾಟ್‍ಗಳು.
ಶರಾವತಿ ಜಲ ವಿದ್ಯುದಾಗಾರದ ಕೆಳ ಹರಿವಿನ (ಟೇಲ್‍ರೇಸ್) ನೀರನ್ನು ಉಪಯೋಗಿಸಿಕೊಂಡು ಗೇರುಸೊಪ್ಪ ಎಂಬಲ್ಲಿ ಶರಾವತಿ ಕೆಳ ಹರಿವು ವಿದ್ಯುದಾಗಾರ ಸ್ಥಾಪಿಸಲಾಗಿದೆ. ಈ ವಿದ್ಯುದಾಗಾರದ ಸ್ಥಾಪಿತ ಸಾಮಥ್ರ್ಯ 240 ಮೆಗಾವಾಟ್‍ಗಳು.
ಕರ್ನಾಟಕದಲ್ಲಿ ಮಾರುತಗಳನ್ನು ಬಳಸಿ ವಿದ್ಯುದಾಗಾರ ಸ್ಥಾಪಿಸುವ ಕೆಲಸವೂ ನಡೆದಿದೆ. ಗದಗ ಜಿಲ್ಲೆಯ ಕಪ್ಪತಗುಡ್ಡ ಎಂಬಲ್ಲಿ ಅಂತಹ ಒಂದು ವಿದ್ಯುದಾಗಾರ ಸ್ಥಾಪಿಸಲಾಗಿದೆ. ಖಾಸಗಿ ಸಂಸ್ಥೆಗಳೂ ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಿವೆ. ಬೆಂಗಳೂರಿಗೆ ಸಮೀಪದ ಬಿಡದಿ ಎಂಬಲ್ಲಿ ಅನಿಲವನ್ನು ಬಳಸಿ ವಿದ್ಯುದಾಗಾರ ಸ್ಥಾಪಿಸುವ ಯೋಜನೆ ಇದೆ. ಇಲ್ಲಿನ ಯೋಜಿತ ಸಾಮಥ್ರ್ಯ 1400 ಮೆಗಾವಾಟ್‍ಗಳು. ಕೇಂದ್ರ ವಿಭಾಗ ಉತ್ತರ ಕನ್ನಡ ಜಿಲ್ಲೆಯ ಕೈಗಾದಲ್ಲಿ ಪರಮಾಣು ವಿದ್ಯುತ್ ಉತ್ಪಾದನಾ ಕೇಂದ್ರ ಸ್ಥಾಪಿಸಿದೆ. ಇಲ್ಲಿ ತಲಾ 220 ಮೆಗಾವಾಟ್‍ಗಳ ಎರಡು ಘಟಕಗಳ ಸ್ಥಾಪನೆಯಾಗಿ ಕಾರ್ಯ ಪ್ರವೃತ್ತವಾಗಿವೆ.
ಬೆಂಗಳೂರಿನಲ್ಲಿ ಡೀಸೆಲ್ ವಿದ್ಯುತ್ ಘಟಕಗಳಿರುವ ವಿದ್ಯುದಾಗಾರವೊಂದು ಸ್ಥಾಪನೆಗೊಂಡಿದೆ. ರಾಜ್ಯದ ಡೀಸೆಲ್ ವಿದ್ಯುತ್ ಸ್ಥಾಪಿತ ಸಾಮಥ್ರ್ಯ 234 ಮೆಗಾವಾಟ್‍ಗಳು (2004 ರಂತೆ).
ತತ್‍ಕ್ಷಣದ ವಿದ್ಯುತ್ ಬೇಡಿಕೆಗಳನ್ನು ಪೂರೈಸಲು ಸಣ್ಣ ಪ್ರಮಾಣದ ಜಲವಿದ್ಯುದಾಗಾರಗಳನ್ನು ಸ್ಥಾಪಿಸಲು ಯತ್ನಿಸಲಾಗಿದೆ. 25 ಮೆಗಾವಾಟ್ ಸಾಮಥ್ರ್ಯದವರೆಗಿನ ಕಿರು ಜಲ ವಿದ್ಯುದಾಗಾರ ಸ್ಥಾಪಿಸಲು ಖಾಸಗಿ ಉದ್ದಿಮೆಗಳಿಗೆ ಅನುಮತಿ ಕೊಡಲಾಗುತ್ತಿದೆ. ಈ ನಿಟ್ಟಿನಲ್ಲಿ ಮುರುಡೇಶ್ವರ ವಿದ್ಯುತ್ ನಿಗಮ ಮೊದಲಾದ ಖಾಸಗಿ ಉದ್ದಿಮೆಗಳು ಕಿರು ಜಲ ವಿದ್ಯುದಾಗಾರಗಳು ಸ್ಥಾಪಿಸುವಲ್ಲಿ ಮುಂದಾಗಿವೆ.
ಭಾರತದ ವಿವಿಧ ವಲಯ ಹಾಗೂ ರಾಜ್ಯಗಳಲ್ಲಿಯ ವಿದ್ಯುತ್ಸಾಮಥ್ರ್ಯ, 31-3-2004ರಲ್ಲಿದ್ದಂತೆ (ಮೆಗಾವಾಟುಗಳಲ್ಲಿ) ಕೇಂದ್ರ ವಿದ್ಯುತ್ ಪ್ರಾಧಿಕಾರದ ಅಧಿಕೃತ ಪ್ರಕಟಣೆ 2004

ರಾಜ್ಯಗಳು ಒಕ್ಕೂಟ ಪ್ರದೇಶಗಳೂ
ಜಲ
ಶಾಖೋತ್ಪನ್ನ
ಡೀಸೆಲ್
ಅನಿಲ
ಮಾರುತ
ಪರಮಾಣು
ಒಟ್ಟು

ಉತ್ತರ ವಲಯ

ಹರಿಯಾನ
883.87
1102.50
3.92
0.00
0.00
0.00
1990.29

ಹಿಮಾಚಲ ಪ್ರದೇಶ
709.00
0.00
0.13
0.00
0.00
0.00
70.9.13

ಜಮ್ಮು-ಕಾಶ್ಮೀರ
309.10
0.00
8.94
175.00
0.00
0.00
493.09

ಪಂಜಾಬ್
2402.17
2130.00
0.00
0.00
0.00
0.00
4532.17

ರಾಜಾಸ್ಥಾನ
668.75
2420.00
0.00
113.80
178.50
0.00
3681.05

ಉತ್ತರ ಪ್ರದೇಶ
518.85
4102.00
0.00
0.00
0.00
0.00
4620.60

ಉತ್ತರಾಂಚಲ
986.85
0.00
0.00
0.00
0.00
0.00
686.85

ಚಂಡೀಘರ್
0.00
0.00
2.00
0.00
0.00
0.00
0.2.00

ದೆಹಲಿ
0.00
320.00
0.00
612.40
0.00
0.00
932.40

ಕೇಂದ್ರ ವಿಭಾಗ
3810.00
5840.00
0.00
2512.00
0.00
1180.00
13142.00

ಒಟ್ಟು (ಉ.ವ)
10588.39
15914.00
14.99
3213.20
178.50
1180.00
31089.58

ಪಶ್ಚಿಮ ವಲಯ

ಗುಜರಾತ್
591.00
4819.00
17.45
1863.32
202.19
0.00
7463.39

ಮಧ್ಯಪ್ರದೇಶ
931.42
2157.50
0.00
0.00
22.65
0.00
3111.57

ಛತ್ತೀಸ್‍ಗಢ
120.00
1280.00
0.00
0.00
0.00
0.00
1400.00

ಮಹಾರಾಷ್ಟ್ರ
2874.16
8075.00
0.00
1832.00
7.40
0.00
13188.56

ಗೋವಾ
0.00
0.00
0.00
48.00
0.22
0.00
48.22

ದಾದ್ರ-ನಗರ ಹಾವೇರಿ
0.00
0.00
0.00
0.00
0.00
0.00
0.00

ಡಮನ್ ಮತ್ತು ಡಯು
0.00
0.00
0.00
0.00
0.00
0.00
0.00

ಕೇಂದ್ರ ವಿಭಾಗ
500.00
4360.00
0.00
1292.00
0.00
760.00
6912.00

ಒಟ್ಟು (ಪ.ವ)
10363.07
20991.50
17.48
5035.72
632.46
760.00
32125.74

ದಕ್ಷಿಣ ವಲಯ

ಆಂಧ್ರ ಪ್ರದೇಶ
3586.12
2952.5
36.80
1112.40
98.80
0.00
7786.62

ಕರ್ನಾಟಕ
2973.50
1730.00
234.42
220.00
209.20
0.00
5367.12

ಕೇರಳ
1807.60
0.00
256.44
174.00
2.03
0.00
2240.07

ತಮಿಳುನಾಡು
1995.85
3220.00
411.66
761.5
1361.63
0.00
7750.64

ಲಕ್ಷದ್ವೀಪ
0.00
0.00
9.97
0.00
0.00
0.00
9.97

ಪಾಂಡಿಚೇರಿ
0.00
0.00
0.00
32.50
0.00
0.00
32.50

ಕೇಂದ್ರ ವಿಭಾಗ
0.00
5590.00
0.00
350.00
0.00
780.00
9720.00

ಒಟ್ಟು (ದ.ವ)
10363.07
13492.5
949.29
2650.40
1671.66
780.00
29906.62

ಪೂರ್ವ ವಲಯ

ಬಿಹಾರ
44.90
553.50
0.00
0.00
0.00
0.00
598.40

ಜಾರ್ಖಂಡ್
130.00
1500.00
0.00
0.00
0.00
0.00
1630.00

ಒರಿಸ್ಸಾ
1877.02
420.00
0.00
0.00
2.68
0.00
2300.90

ಪಶ್ಚಿಮ ಬಂಗಾಳ
161.70
4506.38
12.20
100.00
2.20
0.00
4782.48

ದಾಮೋದರ್ ಕಣಿವೆ ನಿಗಮ
144.00
2637.50
0.00
90.00
0.00
0.00
2871.50

ಅಂಡಮಾನ್ ನಿಕೋಬಾರ್

ದ್ವೀಪಗಳು
05.25
0.00
54.05
0.00
0.00
0.00
59.30

ಸಿಕ್ಕಿಂ
32.00
0.00
5.00
0.00
0.00
0.00
37.00

ಕೇಂದ್ರ ವಿಭಾಗ
60.00
4910.00
0.00
0.00
0.00
0.00
4970.00

ಒಟ್ಟು (ಪೂ.ವ)
2455.77
14527.38
71.25
190.00
5.18
0.00
17249.58

ಈಶಾನ್ಯ ವಲಯ

ಅಸ್ಸಾಂ
2.00
330.00
20.69
299.00
0.00
0.00
621.99

ಮಣಿಪುರ
1.50
0.00
45.41
0.00
0.00
0.00
46.91

ನಾಗಲ್ಯಾಂಡ್
25.50
0.00
2.00
0.00
0.32
0.00
27.82

ತ್ರಿಪುರ
16.00
0.00
4.05
106.50
0.00
0.00
127.55

ಮೇಘಾಲಯ
185.52
0.00
2.05
0.00
0.00
0.00
187.57

ಅರುಣಾಚಲ ಪ್ರದೇಶ
18.50
0.00
15.88
0.00
0.00
0.00
24.38

ಮಿಝೊರಾಂ
4.00
0.00
25.94
0.00
0.00
0.00
32.94

ಕೇಂದ್ರ ವಿಭಾಗ
860.00
0.00
0.00
365.00
0.00
0.00
1255.00

ಒಟ್ಟು (ಈ.ವ)
1113.02
330.00
119.92
750.50
0.32
0.00
2313.66

ಒಟ್ಟು (ಅಖಿಲ ಭಾರತ)
29506.83
94955.88
1172.83
11839.82
2488.12
2788.12
112683.48

											
ಪರಿಷ್ಕರಣೆ
 ಬಿ.ಜಿ.ರಮೇಶ್

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ